ಫಿಲಿಪಿಕಸ್
	 ಬೈಜಾಂಟೈನ್ ಚಕ್ರವರ್ತಿ (711-713), ಪರ್ಗಮಮ್‍ನ ಪೆಟ್ರಿಷಿಯನ್ ನಿಸೆಪೊರಸ್ ಎಂಬವನ ಮಗ. ಬಾರ್ಡೆನೆಸ್ ಎಂಬುದು ಇವನ ಅಂಕಿತನಾಮ. ಇವನನ್ನು ಅಪ್ಸಿಮಾರ್‍ನ ಮೂರನೆಯ ಟೈಬೇರಿಯಸ್ ಸೆಫಲೆನಿಯಕ್ಕೆ ಗಡೀಪಾರು ಮಾಡಿದ್ದ. ಆದರೆ ಎರಡನೆಯ ಜಸ್ಟೀನಿಯನ್ ಇವನನ್ನು ಹಿಂದಕ್ಕೆ ಕರೆಸಿಕೊಂಡು ಕ್ರಿಮಿಯಾದಲ್ಲಿ ದಂಗೆ ಎದ್ದಿದ್ದ ಟಾರಿಕ್ ಚೆರೊಸನ್‍ನನ್ನು ಹತ್ತಿಕ್ಕಲು ಕಳುಹಿಸಿದ. ಆದರೆ ಈತ ಚೆರೋಸನ್ ಪಕ್ಷವನ್ನು ವಹಿಸಿ ಜಸ್ಟೀನಿಯನ್‍ನ ವಿರುದ್ಧ ದಂಗೆಯೆದ್ದ; ಫಿಲಿಪಿಕಸ್ ಎಂಬ ಹೆಸರಿನಿಂದ ಚಕ್ರವರ್ತಿಯಾಗಿ ಘೋಷಿಸಲ್ಪಟ್ಟ. ಅನಂತರ ಕಾನ್‍ಸ್ಟಾಂಟಿನೋಪಲ್‍ಗೆ ಯಾನಮಾಡಿ ಸಿಂಹಾಸನವನ್ನು ವಶಪಡಿಸಿಕೊಂಡು ಜಸ್ಟೀನಿಯನ್ ಮತ್ತು ಅವನ ಕುಟುಂಬದವರನ್ನು ಕೊಲೆ ಮಾಡಿಸಿದ. ಏಕದೇವತಾರಾಧನೆಯಲ್ಲಿ ನಂಬಿಕೆಯನ್ನಿಟ್ಟಿದ್ದ ಫಿಲಿಪಿಕಸ್ ರೋಮಿನ ಸಂಪ್ರದಾಯ ಶರಣರ ವಿರೋಧವನ್ನು ಕೆರಳಿಸಿದರೂ ತನಗೂ ಬೆಂಬಲ ತೋರಿಸುವ ಜನರನ್ನು ಹೊಂದಿದ್ದ. ಲೂಟಿಕೋರ ಬಲ್ಗರ್ಸ್ ಜನಗಳ ವಿರುದ್ಧ ನಗರ ರಕ್ಷಣಾದಳವನ್ನು ವ್ಯವಸ್ಥೆಗೊಳಿಸುವುದರಲ್ಲಿ ಈತ ಅಸಮರ್ಥನಾದ. ಅಂತೆಯೆ ಪೂರ್ವ ಗಡಿಯಲ್ಲಿ ಅರಬರ ವಿರುದ್ಧ ರಕ್ಷಣೆಯನ್ನೇರ್ಪಡಿಸುವುದರಲ್ಲಿ ವಿಫಲನಾದ. ಸೈನಿಕ ವಿರೋಧ 713ರಲ್ಲಿ ಇವನ ಅವನತಿಗೆ ಕಾರಣವಾಯಿತು. ಇವನನ್ನು ಪದಚ್ಯುತಗೊಳಿಸಿದ್ದಲ್ಲದೆ ಇವನ ಕಣ್ಣುಗಳನ್ನೂ ಕೀಳಿಸಲಾಯಿತು.					(ಆರ್.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ